ಮೈಸೂರು-ಚೆನ್ನೈ ಬುಲೆಟ್ ಟ್ರೈನ್ ಸುದ್ದಿ; (4-8-2023)
ಮೈಸೂರು-ಚೆನ್ನೈ ಬುಲೆಟ್ ಟ್ರೈನ್‌ಗೆ ವೈಮಾನಿಕ ಸಮೀಕ್ಷೆ; (4-8-2023)
ಮೈಸೂರು-ಚೆನ್ನೈ ಬುಲೆಟ್ ಟ್ರೈನ್‌ಗೆ ಶೀಘ್ರವೇ ವೈಮಾನಿಕ ಸಮೀಕ್ಷೆ; ನಿಲ್ದಾಣಗಳು ಯಾವುವು? - ಇಲ್ಲಿದೆ ಮಾಹಿತಿ
_VijayKarnataka / 2023-08-04 01:34
ವೆಂ.ಸುನೀಲ್ ಕುಮಾರ್ ಕೋಲಾರ : ಕೇಂದ್ರ ಸರಕಾರದ ಬಹು ನಿರೀಕ್ಷಿತ ಬುಲೆಟ್ ಟ್ರೈನ್ ಯೋಜನೆಗೆ ರಾಜ್ಯದಲ್ಲಿ ಭರದ ಸಿದ್ಧತೆ ನಡೆದಿದೆ. ಮೈಸೂರು-ಚೆನ್ನೈ ನಡುವಿನ ಬುಲೆಟ್ ಟ್ರೈನ್ ಮಾರ್ಗ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ವೈಮಾನಿಕ ಸರ್ವೆ ಕಾರ್ಯ ಶೀಘ್ರದಲ್ಲಿಯೇ ನಡೆಯಲಿದೆ. ಆ ಬಳಿಕ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತದೆ.ಈಗಾಗಲೇ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ಕಾಮಗಾರಿ ಶರವೇಗದಲ್ಲಿಸಾಗುತ್ತಿದೆ. ಇದರ ನಡುವೆಯೇ ಈಗ ಯೋಜನೆಯ ಹಳಿ ನಿರ್ಮಾಣಕ್ಕೆ ಭೂಮಿ ಸಮೀಕ್ಷೆ ಕೆಲಸಗಳು ಮುಗಿದಿದ್ದು, ವೈಮಾನಿಕ ಸಮೀಕ್ಷೆಯೊಂದು ಬಾಕಿ ಇದೆ. ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ದೇಶದ ವಿವಿಧ ಭಾಗಗಳಲ್ಲಿಬುಲೆಟ್ ಟ್ರೈನ್ ಮಾರ್ಗ ನಿರ್ಮಾಣ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇದರ ಅಂಗವಾಗಿ ಮೈಸೂರು-ಚೆನ್ನೈ ಮಾರ್ಗದಲ್ಲಿಬುಲೆಟ್ ಟ್ರೈನ್ ಹಳಿ ನಿರ್ಮಾಣದ ಸರ್ವೆ ಕಾರ್ಯ ಪೂರ್ಣಗೊಂಡಿದೆ.
ಮೈಸೂರಿಂದ ಚೆನ್ನೈವರೆಗೆ 435 ಕಿ.ಮೀ. ಬುಲೆಟ್ ರೈಲು ಮಾರ್ಗ
ಮೈಸೂರಿಂದ ಚೆನ್ನೈವರೆಗೆ 435 ಕಿ.ಮೀ. ಬುಲೆಟ್ ರೈಲು ಮಾರ್ಗ ನಿರ್ಮಾಣವಾಗಬೇಕಿದೆ. ಉಪಗ್ರಹ ಸರ್ವೆ, ಭೂಮಿ ಸರ್ವೆ, ನಕ್ಷೆ, ಅಂದಾಜು ಪಟ್ಟಿ ತಯಾರಿಕೆಯ ಹೊಣೆಯನ್ನು ಹೈದರಾಬಾದ್ ಮೂಲದ ಎಎಆರ್‌ವಿಇಇ ಅಸೋಸಿಯೆಟ್ಸ್ ನಡೆಸುತ್ತಿದ್ದು, ಚೆನ್ನೈ ಕಡೆಯಿಂದ ಕೋಲಾರದ ತನಕದ ಕೆಲಸ ಮುಗಿದಿದೆ. ಕೋಲಾರ ಸಮೀಪದ ಶೆಟ್ಟಿಗಾನಹಳ್ಳಿ ಕೋರಗಂಡನಹಳ್ಳಿ ಮಾರ್ಗದಲ್ಲಿಎಎಆರ್‌ವಿಇಇ ಸಂಸ್ಥೆಯ ಭೂಮಾಪಕರು, ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಮಾರ್ಗಕ್ಕೆ ಅಗತ್ಯವಾಗಿರುವ ನೂರು ಮೀಟರ್ ಅಗಲದ ಜಾಗಕ್ಕೆ ಎರಡೂ ಬದಿಯಲ್ಲಿಗುರುತು ಮಾಡಿ, ಕ್ರಮಸಂಖ್ಯೆ ಹಾಕಿ ವೈಮಾನಿಕ ಸಮೀಕ್ಷೆಗೆ ಅನುಕೂಲವಾಗುವಂತೆ ಪ್ರತ್ಯೇಕ ಸಂಖ್ಯೆಗಳನ್ನು ಒಳಗೊಂಡ ಕೋಡ್ ಹೊಂದಿರುವ ಸಿಮೆಂಟ್, ಜಲ್ಲಿಕಲ್ಲಿನ ಮಿಶ್ರಣದ ಬ್ಲಾಕ್ ನಿರ್ಮಿಸಿದ್ದಾರೆ.
ಎರಡೂವರೆ ಗಂಟೆಯಲ್ಲಿ ಚೆನ್ನೈಗೆ
ಬುಲೆಟ್ ಟ್ರೈನ್ ಗಂಟೆಗೆ ಗರಿಷ್ಠ 350 ಕಿ.ಮೀ. ಅಥವಾ ಸರಾಸರಿ 250 ಕಿ.ಮೀ. ವೇಗದಲ್ಲಿಸಂಚರಿಸಲಿದ್ದು, ಮೈಸೂರಿನಿಂದ ಚೆನ್ನೈಗೆ ಕೇವಲ ಎರಡೂವರೆ ಗಂಟೆಯಲ್ಲಿ ತಲುಪಬಹುದು. ಬುಲೆಟ್ ಟ್ರೈನ್‌ನಿಂದಾಗಿ ರಾಜ್ಯದಲ್ಲಿವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಸದ್ಯ ಬೆಂಗಳೂರು-ಚೆನ್ನೈ ಮಾರ್ಗದಲ್ಲಿಶತಾಬ್ದಿ, ಬೃಂದಾವನ, ಲಾಲ್‌ಬಾಗ್ ಸೇರಿ ಕೆಲ ಸೂಪರ್ ಫಾಸ್ಟ್ ರೈಲುಗಳು ಸಂಚರಿಸುತ್ತಿದ್ದು, ಚೆನ್ನೈಗೆ ತಲುಪಲು ಕನಿಷ್ಠ 5-6 ಗಂಟೆ ಬೇಕಾಗುತ್ತಿದೆ. ಬುಲೆಟ್ ಟ್ರೈನ್‌ನಿಂದಾಗಿ ಕೇವಲ 2.30 ಗಂಟೆಯಲ್ಲಿತಲುಪಬಹುದು.
ರಾಜ್ಯದತ್ತ ಹೆಚ್ಚಿನ ಕೈಗಾರಿಕೆಗಳು ಬರಲಿವೆ
ಅಂತರ ರಾಜ್ಯಗಳ ನಡುವಿನ ಸಂಚಾರ ಅವಧಿ ಕಡಿಮೆಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈಗ ಮೈಸೂರಿನಿಂದ ಚೆನ್ನೈ ನಡುವಿನ ಪ್ರಯಾಣ ಅವಧಿ ಕಡಿಮೆಗೊಳಿಸಲು ಬುಲೆನ್ ಟ್ರೈನ್ ಮಾರ್ಗ ನಿರ್ಮಾಣಕ್ಕಾಗಿ ಸರ್ವೆ ಕಾರ್ಯ ನಡೆಯುತ್ತಿದ್ದು, ಶೀಘ್ರವೇ ವೈಮಾನಿಕ ಸಮೀಕ್ಷೆ ನಡೆಯಲಿದೆ. ಇದರಿಂದಾಗಿ ರಾಜ್ಯದತ್ತ ಹೆಚ್ಚಿನ ಕೈಗಾರಿಕೆಗಳು ಬರಲಿದ್ದು, ಯುವಕರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಪಟ್ಟಿದ್ದಾರೆ.
ಅಂಕಿ-ಅಂಶಗಳು
ಉದ್ದ: 435 ಕಿ.ಮೀ.
ಒಟ್ಟು ನಿಲ್ದಾಣಗಳು: 09
ಗರಿಷ್ಠ ವೇಗ: 350 ಕಿ.ಮೀ.
ಸರಾಸರಿ ವೇಗ: 250 ಕಿ.ಮೀ.
ನಿಲ್ದಾಣಗಳು: ಮೈಸೂರು, ಮಂಡ್ಯ, ಚನ್ನಪಟ್ಟಣ, ಬೆಂಗಳೂರು, ಬಂಗಾರಪೇಟೆ, ಚಿತ್ತೂರು, ಆರ್ಕೋಣಂ, ಪೂನಾಮಲ್ಲೈ, ಚೆನ್ನೈ.